ದತ್, ರಮೇಶಚಂದ್ರ
	1848-1909. ಭಾರತೀಯ ಸಿವಿಲ್ ಸೇವಾ ಅಧಿಕಾರಿ, ದೇಶಭಕ್ತ, ಸಾರ್ವಜನಿಕ ಕಾರ್ಯಕರ್ತ, ವಿದ್ವಾಂಸ, ಭಾರತೀಯ ಅರ್ಥಶಾಸ್ತ್ರ ಇತಿಹಾಸಗಳ ಲೇಖಕ, ಐತಿಹಾಸಿಕ ಸಾಮಾಜಿಕ ಕಾದಂಬರಿಗಳ ರಚಕ. 1848ರ ಆಗಸ್ಟ್ 13ರಂದು ಕಲ್ಕತ್ತದಲ್ಲಿ ಜನಿಸಿದರು. ತಂದೆ ಈಶಾನ್ ಚಂದ್ರದತ್ ಸರ್ಕಾರದ ಕಂದಾಯ ಇಲಾಖೆಯಲ್ಲಿ ಡೆಪ್ಯೂಟಿ ಕಲೆಕ್ಟರರಾಗಿದ್ದರು. ಇವರ ಒಬ್ಬ ಕಕ್ಕ ರಸಮಯ ದತ್ ಕಲ್ಕತ್ತದ ಸಂಸ್ಕøತ ಕಾಲೇಜಿನ ಪ್ರಥಮ ಪ್ರಿನ್ಸಿಪಾಲರು. ಇನ್ನೊಬ್ಬ ಕಕ್ಕ ಶಶಿ ಚಂದ್ರ ದತ್ ಇಂಗ್ಲಿಷಿನಲ್ಲಿ ಪ್ರಸಿದ್ಧ ಬರೆಹಗಾರರು. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಕಾವ್ಯ ರಚಿಸಿ ಪ್ರಸಿದ್ಧಿ ಹೊಂದಿದ ತೋರು ದತ್ ಇವರ ರಕ್ತಸಂಬಂಧಿ.

	ರಮೇಶ ಚಂದ್ರರು ನಾಲ್ಕು ವರ್ಷದವರಾಗಿದ್ದಾಗ ಬಂಗಾಲಿ ಶಾಲೆಯಲ್ಲಿ ಶಿಕ್ಷಣವನ್ನಾರಂಭಿಸಿದರು. 1864ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಎರಡು ವರ್ಷಗಳ ಅನಂತರ ಎಫ್.ಎ. ಪರೀಕ್ಷೆಯಲ್ಲಿ ಎರಡನೆಯವರಾಗಿ ತೇರ್ಗಡೆ ಹೊಂದಿದರು. ಇವರಿಗೆ ಹದಿನಾರು ವರ್ಷ ಆಗಿದ್ದಾಗ ಕಲ್ಕತ್ತದ ನವಗೋಪಾಲ ಬೋಸರ ಮಗಳು ಮಾತಂಗಿನಿ ಬೋಸರೊಂದಿಗೆ ವಿವಾಹವಾಯಿತು.

	ಡೆಪ್ಯುಟಿ ಕಲೆಕ್ಟರರಾಗಿದ್ದ ತಂದೆ ಬಂಗಾಳ, ಬಿಹಾರ ಮತ್ತು ಒರಿಸ್ಸ ಪ್ರಾಂತ್ಯಗಳ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದರು. ಅವರೊಡನೆ ಹೋಗುತ್ತಿದ್ದ ರಮೇಶ ಚಂದ್ರರಿಗೆ ಚಿಕ್ಕಂದಿನಲ್ಲೇ ಅನೇಕ ಜಿಲ್ಲೆಗಳ ಪರಿಚಯವಾಯಿತು. ರಮೇಶಚಂದ್ರರು 11 ವರ್ಷದವರಾಗಿದ್ದಾಗ ಇವರ ತಾಯಿ ತೀರಿಕೊಂಡರು. ಎರಡು ವರ್ಷಗಳ ಅನಂತರ 1864ರಲ್ಲಿ ನದಿಯಲ್ಲಿ ದೋಣಿ ಮುಳುಗಿ ತಂದೆಯೂ ತೀರಿಕೊಂಡರು. ಅನಂತರ ಇವರು ಶಶಿ ಚಂದ್ರರ ಪೋಷಣೆಯಲ್ಲಿ ಬೆಳೆದರು. 1868ರಲ್ಲಿ, ಬಿ.ಎ. ವಿದ್ಯಾರ್ಥಿಯಾಗಿದ್ದಾಗಲೇ ಇವರು ಇಂಗ್ಲೆಂಡಿಗೆ ಹೋಗಿ, ಮರುವರ್ಷ ಐ.ಸಿ.ಎಸ್. ಸ್ಪರ್ಧಾ ಪರೀಕ್ಷೆಯಲ್ಲಿ ಮೂರನೆಯ ಸ್ಥಾನ ಗಳಿಸಿದರು. ಆ ಸಲ ಇವರೊಂದಿಗೆ ಐ.ಸಿ.ಎಸ್. ನಲ್ಲಿ ತೇರ್ಗಡೆ ಹೊಂದಿದ ಇತರರಲ್ಲಿ ಪ್ರಮುಖರಾದವರು ಸುರೇಂದ್ರನಾಥ ಬ್ಯಾನರ್ಜಿ ಮತ್ತು ಬಿಹಾರಿ ಲಾಲ್ ಗುಪ್ತ. ಇವರಿಗೆ ಮೊದಲು ಕೇವಲ ಒಬ್ಬ ಭಾರತೀಯ ಮಾತ್ರ, ರವೀಂದ್ರನಾಥ ಠಾಕೂರರ ಅಣ್ಣ ಸತ್ಯೇಂದ್ರನಾಥ ಠಾಕೂರ್, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಭಾರತಕ್ಕೆ ಮರಳುವ ಮೊದಲು ದತ್ತರು ನ್ಯಾಯವಾದಿಯಾಗಿಯೂ ದೀಕ್ಷೆ ಪಡೆದರು.

	ಭಾರತಕ್ಕೆ ಮರಳಿದ ಮೇಲೆ ಇವರು 1871ರಲ್ಲಿ ಅಲಿಪುರದಲ್ಲಿ ಪರಿವೀಕ್ಷಣಾರ್ಥ ಸಹಾಯಕ ದಂಡಾಧಿಕಾರಿಯಾಗಿ ನೇಮಕ ಹೊಂದಿದರು. 1876ರಲ್ಲಿ ಇವರನ್ನು ಗಂಗಾ ನದಿಯ ಮುಖದಲ್ಲಿರುವ ದಕ್ಷಿಣ ಶಹಬಾದಪುರಕ್ಕೆ ಕಳುಹಿಸಲಾಯಿತು. ಮಹಾಪೂರ ಮತ್ತು ರೋಗಗಳಿಂದ ಅಲ್ಲಿ ಅವ್ಯವಸ್ಥೆ ಉಂಟಾಗಿತ್ತು. ರಮೇಶ ಚಂದ್ರರು ಪ್ರತಿಭೆಯಿಂದ ಕೆಲಸಮಾಡಿ ಅಲ್ಲಿ ವ್ಯವಸ್ಥೆ ನೆಲಸುವುದಕ್ಕೆ ಕಾರಣರಾದರು. ಭಾರತೀಯ ಅಧಿಕಾರಿಗಳು ಜವಾಬ್ದಾರಿಯ ಕೆಲಸಗಳನ್ನು ಇಂಗ್ಲಿಷ್ ಅಧಿಕಾರಿಗಳಿಗಿಂತಲೂ ಹೆಚ್ಚು ದಕ್ಷತೆಯಿಂದ ವಹಿಸಿಕೊಳ್ಳಬಲ್ಲರೆಂಬುದನ್ನು ರುಜುವಾತು ಪಡಿಸಿದರು. ಹತ್ತು ವರ್ಷಗಳಲ್ಲಿ ಇವರು ಪ್ರಥಮ ಭಾರತೀಯ ಜಿಲ್ಲಾಧಿಕಾರಿಗಳಾದರು. 1894ರಲ್ಲಿ ಬದ್ರ್ವಾನ್ ವಿಭಾಗಾಧಿಕಾರಿಯಾಗಿ, ಆ ಹುದ್ದೆಯನ್ನು ವಹಿಸಿಕೊಂಡ ಭಾರತೀಯರಲ್ಲಿ ಮೊದಲಿಗರಾದರು. ಆದರೆ ಇವರು ಇಂಗ್ಲಿಷರಾಗಿಲ್ಲದೆ ಭಾರತೀಯರಾದುದರಿಂದ 4 ವರ್ಷಗಳ ಕಾಲ ಹಂಗಾಮಿಯಾಗಿ ಆ ಹುದ್ದೆ ನಿರ್ವಹಿಸಬೇಕಾಯಿತು. ಒಟ್ಟು 26 ವರ್ಷಗಳ ಸೇವೆ ಸಲ್ಲಿಸಿ, 49 ವರ್ಷದವರಿದ್ದಾಗ 1897ರಲ್ಲಿ ನಿವೃತ್ತರಾದರು. ಆ ಸಮಯದಲ್ಲಿ ಇವರು ಒರಿಸ್ಸದಲ್ಲಿ ಅಧಿಕಾರಿಯಾಗಿದ್ದರು.

	ಸರ್ಕಾರದ ಸೇವೆಯಲ್ಲಿದ್ದಾಗ ಇವರು ಮಾಡಿದ ಕೆಲಸ ಲೆಫ್ಟೆನಂಟ್ ಗವರ್ನರ್, ಗವರ್ನರ್-ಜನರಲ್ ಮೊದಲಾಗಿ ಎಲ್ಲರಿಂದಲೂ ಶ್ಲಾಘನೆ ಪಡೆಯಿತು. ಸೇವಾ ನಿವೃತ್ತಿಯ ಅನಂತರ ಅವರು ಇನ್ನೂ ಹೆಚ್ಚು ಫಲಪ್ರದವಾದ ಜೀವನ ಆರಂಭಿಸಿದರು. ಇವರು ತಮ್ಮ ಸಮಯವನ್ನು ಸಮಾಜಕಾರ್ಯಗಳಲ್ಲಿಯೂ ಬರೆಯುವುದರಲ್ಲಿಯೂ ಕಳೆಯಲಾರಂಭಿಸಿದರು. ಅಧಿಕಾರದಲ್ಲಿದ್ದಾಗಲೇ ಇವರು ಪ್ರಥಮ ದರ್ಜೆಯ ವಾಗ್ಮಿಗಳೆಂದೂ ತಮ್ಮ ಸ್ವತಂತ್ರ ವಿಚಾರಗಳನ್ನು ಬಹಿರಂಗಗೊಳಿಸಲು ಹಿಂಜರಿಯುವವರಲ್ಲವೆಂದೂ ಹೆಸರುವಾಸಿಯಾಗಿದ್ದರು. ಆಗಲೇ ಬರೆವಣಿಗೆಯಲ್ಲಿ ತೊಡಗಿದ್ದರು.

	1897ರಿಂದ 1904ರ ವರೆಗೆ ಇಂಗ್ಲೆಂಡಿನಲ್ಲಿದ್ದಾಗ ಭಾರತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಹಾನುಭೂತಿಯಿಂದ ವಿಚಾರಮಾಡುವ ಆವಶ್ಯಕತೆಯನ್ನು ಕುರಿತು ಆಂದೋಲನ ನಡೆಸಿದರು. ಆ ಸಮಯದಲ್ಲಿ ಇವರು ಇಂಗ್ಲೆಂಡಿನ ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾರತದ ಇತಿಹಾಸದ ಅಧ್ಯಾಪಕರಾಗಿದ್ದರು. ಇವರ ಆಂದೋಲನದಿಂದಾಗಿ ಇಂಗ್ಲಿಷರು ಭಾರತೀಯರ ರಾಜಕೀಯ ಬೇಡಿಕೆಗಳ ಬಗ್ಗೆ ವಿಚಾರಮಾಡುವಂತಾಯಿತು. ಇವರ ಆಂದೋಲನಕ್ಕಾಗಿ ಕೃತಜ್ಞರಾದ ಭಾರತೀಯರು ಇವರನ್ನು 1899ರಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರನ್ನಾಗಿ ಆರಿಸಿದರು. ಈ ಸ್ಥಾನದಲ್ಲಿ ಅವರು ಮಾಡಿದ ಭಾಷಣವನ್ನು ಎಲ್ಲ ಪಕ್ಷಗಳೂ ಪ್ರಶಂಸಿಸಿದುವು. ಇವರು ಭಾರತೀಯರ ಅತ್ಯಂತ ಪರಿಣಾಮಕಾರಿಯಾದ ವಕ್ತಾರರೆಂದು ಎಲ್ಲರೂ ಒಪ್ಪಿಕೊಂಡರು.

	1904ರಲ್ಲಿ ಬಡೋದೆಯ ಮಹಾರಾಜ ಸಯಾಜಿರಾವ್ ಗಾಯಕವಾಡರ ಒತ್ತಾಯದಿಂದ ಆ ಸಂಸ್ಥಾನದ ಹಣಕಾಸಿನ ಮಂತ್ರಿ ಹುದ್ದೆ ವಹಿಸಿಕೊಂಡು ಮೂರು ವರ್ಷ ಇವರು ಕೆಲಸ ಮಾಡಿದರು. ರೈತರ ತೆರಿಗೆಯ ಹೆಚ್ಚಳವನ್ನು ಕಡಿಮೆ ಮಾಡಿದ್ದು, ಕ್ಲೇಶದಾಯಕವಾದ ಕಂದಾಯಗಳನ್ನೂ ಶುಲ್ಕಗಳನ್ನೂ ರದ್ದುಗೊಳಿಸಿದ್ದು, ನ್ಯಾಯಾಂಗವನ್ನು ಕಾರ್ಯಾಂಗದಿಂದ ಬೇರ್ಪಡಿಸಿದ್ದು, ಉಚಿತ ಮತ್ತು ಕಡ್ಡಾಯ ಶಿಕ್ಷಣ, ರಾಜ್ಯ ಪರಿಷತ್ತಿನ ಸಂಘಟನೆ, ಗ್ರಾಮಪಂಚಾಯಿತಿಗಳ ಸಂಘಟನೆ ಮತ್ತು ಉದ್ಯೋಗ ಮತ್ತು ವ್ಯವಸಾಯಗಳನ್ನು ಉನ್ನತಿಗೊಳಿಸಿದ್ದು-ಇವು ಅವರು ಬಡೋದೆಯಲ್ಲಿ ಸಾಧಿಸಿದ ಸುಧಾರಣೆಗಳು.

	1907ರಲ್ಲಿ ರಮೇಶ ಚಂದ್ರರು ವಿಕೇಂದ್ರೀಕರಣ ಆಯೋಗದ ಏಕಮಾತ್ರ ಭಾರತೀಯ ಸದಸ್ಯರಾಗಿದ್ದರು. 1909ರಲ್ಲಿ ಅವರು ಬಡೋದೆ ಸಂಸ್ಥಾನದ ದಿವಾನರಾದರು. ಆದರೆ ಆರೇ ತಿಂಗಳು ಸೇವೆ ಸಲ್ಲಿಸಿದ ಅನಂತರ ಹೃದಯಾಘಾತದಿಂದ 1909ರ ನವೆಂಬರ್ 30ರಂದು ಅವರಿಗೆ ಅಕಾಲ ಮರಣಬಂದೊದಗಿತು. ಅವರಿಗೆ ಐದು ಹೆಣ್ಣು ಮತ್ತು ಒಂದು ಗಂಡು ಮಕ್ಕಳು.

		ರಮೇಶಚಂದ್ರರು ಅರ್ಥಶಾಸ್ತ್ರ, ಆರ್ಥಿಕ ಇತಿಹಾಸ, ಪ್ರಾಚೀನ ಭಾರತೀಯ ಸಂಸ್ಕøತಿ-ಇವುಗಳನ್ನು ಕುರಿತು ಅನೇಕ ಕೃತಿಗಳನ್ನು ಬರೆದರು. ಅನೇಕ ಕಾದಂಬರಿಗಳನ್ನೂ ಬಂಗಾಲಿಯಲ್ಲಿ ರಚಿಸಿದರು. ತಮ್ಮ ಜೀವಮಾನದಲ್ಲಿ ಒಟ್ಟು 18ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು. 1875ರಲ್ಲಿ ಪ್ರಕಟವಾದ ಪೆಸೆಂಟ್ರಿ ಆಫ್ ಬೆಂಗಾಲ್ ಎಂಬ ಪುಸ್ತಕ ರೈತರ ಆರ್ಥಿಕ ಸಮಸ್ಯೆಗಳನ್ನು ಕುರಿತದ್ದು. ಈ ಕೃತಿಯಲ್ಲಿ ವ್ಯಕ್ತವಾಗಿರುವ ಲೇಖಕರ ವಿಚಾರಗಳು ಫ್ಯಾಮಿನ್ಸ್ ಆಫ್ ಇಂಡಿಯ (1900) ಎಂಬ ಇನ್ನೊಂದು ಗ್ರಂಥದಲ್ಲಿ ವಿಸ್ತಾರಗೊಂಡಿವೆ. ಈ ಕೃತಿಯಲ್ಲಿ ಅವರು ಭೂ ಕಂದಾಯ ಅತಿಯಾಗಿದೆಯೆಂದು ವಾದಿಸಿ, ರೈತರು ಮಧ್ಯವರ್ತಿಗಳಿಗೆ ಕೊಡಬೇಕಾದ ಗೇಣಿಯನ್ನು ಖಾಯಂ ಆಗಿ ನಿರ್ದಿಷ್ಟಗೊಳಿಸಬೇಕಾದ ಆವಶ್ಯಕತೆಯನ್ನು ಪ್ರತಿಪಾದಿಸಿದರು. ಇಂಡಿಯ ಅಂಡರ್ ಅರ್ಲಿ ಬ್ರಿಟಿಷ್ ರೂಲ್. 1757-1837 (1902) ಮತ್ತು ಇಕನಾಮಿಕ್ ಹಿಸ್ಟೊರಿ ಆಫ್ ಇಂಡಿಯ ಇನ್ ದಿ ವಿಕ್ಟೋರಿಯನ್ ಏಜ್ (1902)-ಇವು ದತ್ತರ ಮೇರು ಕೃತಿಗಳು; ಬ್ರಿಟಿಷರ ಆಡಳಿತದಲ್ಲಿ ಆಗುತ್ತಿದ್ದ ಭಾರತದ ಆರ್ಥಿಕ ಶೋಷಣೆಯ ಬಗ್ಗೆ ಸಪ್ರಮಾಣವಾದ ಮತ್ತು ಪಂಡಿತೋಚಿತವಾದ ಗ್ರಂಥಗಳು. ಇಲ್ಲಿ ಲೇಖಕರು ರೈತರ ಬಡತನ, ಮತ್ತೆಮತ್ತೆ ತಲೆದೋರುವ ದುರ್ಭಿಕ್ಷಗಳು, ಭೂ ಕಂದಾಯದ ಅತಿಭಾರ, ದೇಶೀಯ ಉದ್ಯೋಗಗಳ ಅವನತಿ, ವಿದೇಶೀ ಬಂಡವಾಳದ ಆಘಾತ, ಆಡಳಿತದ ವಿಪರೀತ ಖರ್ಚು ಮತ್ತು ಇತರ ಸಂಬಂಧಿ ವಿಷಯಗಳನ್ನು ಯಥಾವತ್ತಾಗಿ ಮತ್ತು ನಿಷ್ಕøಷ್ಟವಾಗಿ ವಿಶ್ಲೇಷಿಸಿದ್ದಾರೆ. ಭೂ ಕಂದಾಯ ಕುರಿತು ಇರುವ ಮತ್ತೆ ಪ್ರತಿಪಾದಿಸಿ ಬರೆದ ಪ್ರಸಿದ್ಧ ಬಹಿರಂಗಪತ್ರಗಳಿಗೆ ವೈಸ್‍ರಾಯ್ ಲಾರ್ಡ್ ಕಜರ್ûನ್ ಅಧಿಕೃತವಾಗಿ ನೀಡಿದ ಉತ್ತರವೇ 1902ರ ಗೊತ್ತುವಳಿ.

		ರಮೇಶ್‍ಚಂದ್ರರಿಗೆ ಭಾರತದ ಇತಿಹಾಸ ಮತ್ತು ಸಂಸ್ಕøತಿಗಳಲ್ಲೂ ವಿಶೇಷ ಆಸಕ್ತಿಯಿತ್ತು. ಭಾರತೀಯರು ತಮ್ಮ ಪ್ರಾಚೀನ ಕಲೆ ಮತ್ತು ಸಂಸ್ಕøತಿಗಳನ್ನು ಗೌರವಿಸುವುದನ್ನು ಕಲಿಸಿದವರಲ್ಲಿ ಇವರೂ ಒಬ್ಬರು. ಅಧಿಕಾರದಲ್ಲಿರುವಾಗಲೇ ಇವರು ಭಾರತದ ಇತಿಹಾಸ ಕುರಿತ ಕೃತಿಗಳನ್ನು ಬರೆದಿದ್ದರು. ಆದರೆ 1899ರಲ್ಲಿ ಮೂರು ಸಂಪುಟಗಳಲ್ಲಿ ಹೊರಬಿದ್ದ ಹಿಸ್ಟೊರಿ ಆಫ್ ಸಿವಿಲಿಸೇಷನ್ ಇನ್ ಏನ್ಷೆಂಟ್ ಇಂಡಿಯ (ಪ್ರಾಚೀನ ಭಾರತದ ಸಂಸ್ಕøತಿಯ ಇತಿಹಾಸ) ಎಂಬ ಕೃತಿ ಅತ್ಯಂತ ಮಹತ್ತ್ವದ್ದು. ಇವರು ರಾಮಾಯಣ ಮಹಾಭಾರತಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದರು. ಬಂಗಾಲಿಯಲ್ಲಿ ಈ ಮಹಾಕಾವ್ಯಗಳ ಹಾಗೂ ಋಗ್ವೇದ ಮತ್ತು ಇತರ ಕೆಲವು ಸಂಸ್ಕøತ ಕೃತಿಗಳ ಅನುವಾದಗಳನ್ನು ಪ್ರಕಟಿಸಿದರು. ಬಂಗಾಲಿ ಸಾಹಿತ್ಯದಲ್ಲಿ ಇವರು ಮುಖ್ಯವಾಗಿ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳ ಕ್ಷೇತ್ರದಲ್ಲಿ ಸ್ಥಾನ ಗಳಿಸಿದ್ದಾರೆ. ರಜಪೂತ ಜೀವನ ಸಂಧ್ಯಾ, ಮಹಾರಾಷ್ಟ್ರ ಜೀವನ ಪ್ರಭಾತ, ವಂಗ ವಿಜೇತ, ಮಾಧವೀ ಕಂಕಣ ಎಂಬ ಐತಿಹಾಸಿಕ ಕಾದಂಬರಿಗಳಲ್ಲಿ ಮೊಗಲರ ಆಡಳಿತದ ಸುಮಾರು ನೂರು ವರ್ಷಗಳ ಇತಿಹಾಸ ಸನ್ನಿಹಿತವಾಗಿದೆ. ಇವುಗಳಲ್ಲಿ ಮೊದಲನೆಯ ಎರಡು ರಾಣಾಪ್ರತಾಪ ಮತ್ತು ಛತ್ರಪತಿ ಶಿವಾಜಿಯ ಜೀವನಗಳಲ್ಲಿಯ ಘಟನೆಗಳ ಆಧಾರದ ಮೇಲೆ ಬರೆದವು. ಕಾದಂಬರಿಗಳನ್ನು ಬರೆಯುವುದರಲ್ಲಿ ಇವರಿಗಿದ್ದ ಪ್ರತಿಭೆಯನ್ನು ಮತ್ತು ಇವರ ರಾಷ್ಟ್ರಪ್ರೇಮವನ್ನು ಈ ಕೃತಿಗಳು ಎತ್ತಿತೋರಿಸುತ್ತವೆ. ಸಂಸಾರ (1885) ಮತ್ತು ಸಮಾಜ (1893)-ಇವು ಸಾಮಾಜಿಕ ಕಾದಂಬರಿಗಳು. ಇವರ ಕಾದಂಬರಿಗಳಲ್ಲಿ ಮಿತ್ರ ಬಂಕಿಮ್ ಚಂದ್ರ ಚಟರ್ಜಿಯವರ ಪ್ರಭಾವವನ್ನು ಗುರುತಿಸಬಹುದು.

	ಭಾರತೀಯ ಕರೆನ್ಸಿ ಕುರಿತ ಫೌಲರ್ ಸಮಿತಿಯ ಮುಂದೆ ದತ್ತರು ನೀಡಿದ ಸಾಕ್ಷ್ಯ (1898) ಆ ವಿಷಯವನ್ನು ಕುರಿತು ಅಧ್ಯಯನ ನಡೆಸುವವರಿಗೆ ತುಂಬ ಉಪಯುಕ್ತವಾಗಿದೆ. 1897ರಲ್ಲಿ ಪ್ರಕಟವಾದ ಇಂಗ್ಲೆಂಡ್ ಅಂಡ್ ಇಂಡಿಯ ಎಂಬ ಕೃತಿಯಲ್ಲಿ 19ನೆಯ ಶತಮಾನದ ಭಾರತದ ಆಡಳಿತ ಸಮಸ್ಯೆಗಳನ್ನು ಇವರು ವಿಶ್ಲೇಷಿಸಿದ್ದಾರೆ. ಇವಲ್ಲದೆ ಇವರು ಬರೆದ ಹಲವಾರು ಲೇಖನ, ಪ್ರಬಂಧ, ಕಿರುಹೊತ್ತಗೆಗಳೂ ಅಧ್ಯಕ್ಷಭಾಷಣಗಳೂ ಇವರ ಪ್ರತಿಭೆಯ ಪ್ರತೀಕಗಳಾಗಿವೆ.

	ದಾದಾಭಾಯಿ ನವರೋಜಿ, ವಿಲಿಯಮ್ ಡಿಗ್ಬಿ ಇವರಂತೆ ರಮೇಶಚಂದ್ರ ದತ್ತರ ಕೃತಿಗಳೂ ಕ್ರಾಂತಿಯ ಉದ್ದೇಶಕ್ಕೆ ಸಹಾಯಕವಾಗಿದ್ದು ಭಾರತೀಯರ ರಾಷ್ಟ್ರೀಯತೆಗೆ ರಾಜಕೀಯ ಮತ್ತು ಆರ್ಥಿಕ ನೆಲಗಟ್ಟನ್ನು ಒದಗಿಸಿದುವು. ಬ್ರಿಟಿಷರ ಆಡಳಿತ ಅತ್ಯಂತ ಬಿಗಿಯಾಗಿದ್ದ ಕಾಲದಲ್ಲಿ ರಮೇಶಚಂದ್ರರು ಬರೆದ ಕೃತಿಗಳು ಅವರ ಮನಸ್ಸಿನ ಸ್ಥೈರ್ಯ ಮತ್ತು ರಾಷ್ಟ್ರೀಯತಾ ಮನೋಭಾವಗಳು ಎಷ್ಟು ಉನ್ನತವಾಗಿದ್ದುವೆಂಬುದನ್ನು ತೋರಿಸುತ್ತವೆ. ಭಾರತದ ಬಡತನದ ಕಾರಣಗಳು, ಆಡಳಿತಸಮಸ್ಯೆಗಳು, ಮುಂತಾದ ವಿಷಯಗಳ ಬಗ್ಗೆ ಇವರ ವಿಚಾರಗಳು ಆಳರಸರ ವಿಚಾರಗಳಿಗಿಂತ ತೀರ ಭಿನ್ನವಾಗಿದ್ದುವು. ಆದರೆ ಇವರು ತಮ್ಮ ವಿಚಾರಗಳನ್ನು ಬಹಿರಂಗಗೊಳಿಸಲು ಎಂದೂ ಹಿಂಜರಿಯಲಿಲ್ಲ. ಕೀರ್ತಿ ಪ್ರತಿಷ್ಠೆಗಳನ್ನು ಆಶಿಸದೆ, ಭಾರತವನ್ನು ಉನ್ನತ ಸ್ಥಿತಿಗೆ ಒಯ್ಯುವುದೇ ರಮೇಶಚಂದ್ರ ದತ್ತರ ಹೆಗ್ಗುರಿಯಾಗಿತ್ತು.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ